ಟಿ.ಎಸ್. ಗೋಪಾಲ್
ಶಕ್ತಿದೇವತೆಯ ವಿವಿಧ ರೂಪಗಳಲ್ಲಿ ಸರಸ್ವತಿಯ ಹೆಸರೂ ಸೇರುತ್ತದೆ. ಆದಿಶಕ್ತಿಯ ವಿವಿಧ ರೂಪಗಳನ್ನು ಅರ್ಚಿಸುವ ನವರಾತ್ರಿಯ ಪೂಜಾವಿಧಿಗಳಲ್ಲಿ ಸರಸ್ವತೀಪೂಜೆಯೂ ಸಾಂಗವಾಗಿ ನೆರವೇರುತ್ತದೆ. ವಿದ್ಯಾದೇವಿಯ ಅವತಾರವಾದ ಸರಸ್ವತಿಯನ್ನು ವೇದಗಳಲ್ಲಿ ನದಿಯೆಂದೂ ದೇವತೆಯೆಂದೂ ಗುರುತಿಸಲಾಗಿದೆ. ಒಂದು ಕಾಲಕ್ಕೆ ನದಿಯಾಗಿ ಹರಿದು ಹರಿವನ್ನು ಬದಲಿಸುತ್ತಲೇ ಅಂತರ್ಧಾನಳಾದ ಸರಸ್ವತಿ ವಿದ್ಯಾದೇವತೆಯಾದ ಕಥೆಯನ್ನು ಕೇಳಿದ್ದೇವೆ.
ಹನ್ನೆರಡನೆಯ ಶತಮಾನದ ಒಂದು ಕನ್ನಡ ಶಾಸನ ಪದ್ಯ ಹೀಗೆ ಹೇಳುತ್ತದೆ: ಸಮಸ್ತ ಬ್ರಹ್ಮಾಂಡಗಳನ್ನು ಮಣಿಮಾಲೆಯಾಗಿ ಕೈಯಲ್ಲಿ ಧರಿಸಿ, ತನಗೆ ಶರಣುಬಂದವರಿಗೆ ಲೇಸನ್ನು ಬಯಸುತ್ತ ಯಾವ ದೇವಿಯು ಹಗಲಿರುಳೂ ಜಪಿಸುತ್ತಿರುವಳೋ ಆ ಸರಸ್ವತಿಯು ನಮ್ಮ ನಾಲಗೆಯಲ್ಲಿ ಸದಾ ನೆಲೆಸಿರಲಿ. ಸರಸ್ವತಿಯು ಸಕಲಜಗತ್ತಿಗೆ ಒಳಿತನ್ನು ಬಯಸುತ್ತಾ ಸದಾ ತಪೋನಿರತಳಾಗಿರುವ ಯೋಗಿನಿ ಎಂಬ ಈ ವರ್ಣನೆ ಶ್ರೇಷ್ಠ ಆದರ್ಶದ ಮಾದರಿಯನ್ನು ಮುಂದಿಡುತ್ತದೆ. ಹೊಯ್ಸಳಶಿಲ್ಪಗಳಲ್ಲಿ ಮೂಡಿಬಂದಿರುವ ಈ ಸಾತ್ವಿಕದೇವತೆಯ ರೂಪವೂ ಮೇಲಿನ ಶಾಸನಪದ್ಯಕ್ಕೆ ಅನುಗುಣವಾಗಿರುವುದನ್ನು ಕಾಣಬಹುದು.
ಸರಸ್ವತಿಯನ್ನು ವಿದ್ಯಾದೇವತೆಯೆಂದೂ ನದೀದೇವತೆಯೆಂದೂ ಗುರುತಿಸಿದ ಪರಿಣಾಮವಾಗಿ ಜಾತಿಮತಭೇದವಿಲ್ಲದೆ ಈ ದೇವಿಯು ಸಮಾಜದ ಭಕ್ತಿಗೌರವಗಳಿಗೆ ಪಾತ್ರಳಾಗಿದ್ದಾಳೆ. ಶೃಂಗೇರಿಯಲ್ಲಿರುವ ಶಾರದಾ ದೇಗುಲದಂತೆ , ಹೊಯ್ಸಳರ ಕಾಲದಲ್ಲಿ ಸರಸ್ವತಿಗಾಗಿ ಪ್ರತ್ಯೇಕ ದೇವಾಲಯಗಳನ್ನೇನೂ ನಿರ್ಮಿಸಲಿಲ್ಲ . ಆದರೆ, ಆ ಕಾಲದ ಬಹುತೇಕ ಗುಡಿಗಳಲ್ಲಿ ಸರಸ್ವತಿಯ ಶಿಲ್ಪಗಳು ಕಾಣಸಿಗುತ್ತವೆ. ಇಂತಹ ಶಿಲ್ಪಗಳು ಸ್ಥಾನಕ ಎಂದರೆ ನಿಂತಿರುವ ಭಂಗಿಯಲ್ಲೋ, ಆಸೀನ ಎಂದರೆ ಕುಳಿತಿರುವ ಸ್ಥಿತಿಯಲ್ಲೋ ಕಂಡುಬರುತ್ತವೆ.
ಸಾಮಾನ್ಯವಾಗಿ ಚತುರ್ಭುಜಳಾಗಿರುವ ಸರಸ್ವತಿಯು ತನ್ನ ಬಲಮೇಲುಗೈಯಲ್ಲಿ ಅಂಕುಶವನ್ನೂ, ಎಡಮೇಲುಗೈಯಲ್ಲಿ ಪಾಶವನ್ನೂ ಎಡಗೈಯಲ್ಲಿ ಪುಸ್ತಕವನ್ನೂ ಬಲಗೈಯಲ್ಲಿ ಅಕ್ಷಮಾಲೆಯನ್ನೂ ಹಿಡಿದಿರುತ್ತಾಳೆ. ಆಸೀನ ಸ್ಥಿತಿಯಲ್ಲಿರುವ ಸರಸ್ವತಿಯ ವಿಗ್ರಹಗಳಲ್ಲೆಲ್ಲ ಇದೇ ಕಲ್ಪನೆಯಿದೆ. ಕೆಲವು ದೇವಾಲಯಗಳ ಒಳಭಾಗದ ಕೋಷ್ಠಗಳಲ್ಲಿ ಸರಸ್ವತಿಯ ವಿಗ್ರಹಕ್ಕೂ ಸ್ಥಾನ ಕಲ್ಪಿಸಲಾಗಿದೆ. ಈ ಮಾದರಿಯ ಎರಡು ಸೊಗಸಾದ ವಿಗ್ರಹಗಳನ್ನು ಹಾಸನದ ಸಮೀಪವಿರುವ ಮೊಸಳೆಗ್ರಾಮದಲ್ಲೂ ಚನ್ನರಾಯಪಟ್ಟಣದ ಅಗ್ರಹಾರ ಬೆಳಗುಲಿಯಲ್ಲೂ ಕಾಣಬಹುದು. ಈ ಎರಡೂ ವಿಗ್ರಹಗಳು ಸುಸ್ಥಿತಿಯಲ್ಲಿದ್ದು ಸೂಕ್ಷ್ಮವಾದ ಕೆತ್ತನೆ, ಆಭರಣವಿನ್ಯಾಸ ಮೊದಲಾದವುಗಳೊಡನೆ ಮನಸೆಳೆಯುತ್ತವೆ. ಅಗ್ರಹಾರ ಬೆಳಗುಲಿಯ ಮೂರ್ತಿಯ ಸುತ್ತಲಿನ ಸಿಂಹಮುಖದ ಪ್ರಭಾವಳಿ ಆಕರ್ಷಕವಾಗಿದೆ. ಹೊರಗೋಡೆಯ ಮೇಲಿರುವ ಶಿಲ್ಪಗಳಲ್ಲಿ ಆಸೀನಸ್ಥಿತಿಯಲ್ಲಿರುವ ಸರಸ್ವತಿಯ ವಿಗ್ರಹಗಳನ್ನು ಕಾಣುವುದು ಅಪರೂಪ. ಮಂಡ್ಯದ ಹೊಸಹೊಳಲು ದೇವಾಲಯದ ಹೊರಗೋಡೆಯ ಮೇಲೆ ಆಸೀನಸರಸ್ವತಿಯ ಶಿಲ್ಪವೊಂದನ್ನು ಕಾಣಬಹುದು.
ಹೊಯ್ಸಳ ದೇವಾಲಯದ ಹೊರಗೋಡೆಗಳ ಮೇಲೆ ಕಂಡುಬರುವ ಸರಸ್ವತಿಯ ಶಿಲ್ಪಗಳು ಸ್ಥಾನಕ ಭಂಗಿಯಲ್ಲಿರುವುದೇ ಹೆಚ್ಚು. ಈ ಸ್ಥಿತಿಯನ್ನು ಸ್ಥಾನಕ ಎಂದು ಕರೆಯುವುದಕ್ಕಿಂತ ನೃತ್ಯಭಂಗಿ ಎಂದು ಕರೆಯುವುದೇ ಸೂಕ್ತ. ಆಸೀನಸ್ಥಿತಿಯ ವಿಗ್ರಹಕ್ಕಿಂತ ನಿಂತಿರುವ ಭಂಗಿಯನ್ನು ಚಿತ್ರಿಸುವ ಶಿಲ್ಪಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ಹಾರನಹಳ್ಳಿಯ ಕೇಶವದೇವಾಲಯ ಹಾಗೂ ಹಳೇಬೀಡಿನ ಕೇದಾರೇಶ್ವರ ಗುಡಿಗಳಲ್ಲಿರುವ ಸರಸ್ವತಿಗೆ ಆರು ಭುಜಗಳು. ಜಾವಗಲ್, ನುಗ್ಗೇಹಳ್ಳಿ, ಹಳೇಬೀಡು ಹೊಯ್ಸಳೇಶ್ವರ ಗುಡಿಗಳಲ್ಲಿನ ಸರಸ್ವತಿ ಅಷ್ಟಭುಜೆಯಾಗಿದ್ದಾಳೆ. ಕೈಗಳ ಸಂಖ್ಯೆಗೆ ಅನುಗುಣವಾಗಿ ಪಾಶ, ಅಂಕುಶ, ಅಕ್ಷಮಾಲೆ, ಪುಸ್ತಕಗಳೊಡನೆ ಕಮಲವೋ ತೆನೆಯೋ ಕೈಸೇರಬಹುದು. ಇಲ್ಲವೇ ತನ್ನ ನೃತ್ಯಕ್ಕೆ ತಾನೇ ಸಂತೋಷಿಸುತ್ತ ಅಂಗೈಯೊಂದನ್ನು ಮೇಲೆತ್ತಿ ಮೈಮರೆತಿರುವ ಭಂಗಿಯನ್ನೂ ಕಾಣಬಹುದು. ವೀಣೆಯನ್ನು ನುಡಿಸುತ್ತ ನರ್ತಿಸುತ್ತಿರುವ ಸರಸ್ವತಿಯ ಶಿಲ್ಪಗಳನ್ನು ಜಾವಗಲ್ಲು ಹಾಗೂ ಹಳೇಬೀಡಿನ ಕೇದಾರೇಶ್ವರ, ಹೊಯ್ಸಳೇಶ್ವರ ಗುಡಿಗಳೆರಡರಲ್ಲೂ ಕಾಣಬಹುದು. ನೃತ್ಯಸರಸ್ವತಿಯ ಶಿಲ್ಪಗಳಲ್ಲಿ ಕಾಲಿನೆಡೆ ಕಂಡುಬರುವ ಸಹಚರರು ತಾಲಮೃದಂಗಗಳನ್ನು ಹಿಡಿದು ಸಂಗೀತಕ್ಕೆ ಪಕ್ಕವಾದ್ಯ ನುಡಿಸುತ್ತಿರುತ್ತಾರೆ. ಹಳೇಬೀಡಿನ ಒಂದು ಶಿಲ್ಪದಲ್ಲಿ ಮಾತ್ರ ಪರಿವಾರದ ಸಖಿಯರು ಚಾಮರಧಾರಿಣಿಗಳಾಗಿ ಕಾಣಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಹೊಯ್ಸಳ ಗುಡಿಗಳ ಗೋಪುರದ ಮೇಲೆ ಸಿಂಹಮುಖದ ಪ್ರಭಾವಳಿಯೊಳಗೆ ಕೆಲವು ದೇವತಾಮೂರ್ತಿಗಳನ್ನು ಕಾಣಬಹುದು. ಇಂಥ ಕಿರುವಿಗ್ರಹಗಳಲ್ಲಿ ತೀರಾ ಅಪೂರ್ವವೆಂಬಂತೆ ನಾಟ್ಯಸರಸ್ವತಿಯ ಶಿಲ್ಪವೊಂದು ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಗೋಪುರಭಾಗದಲ್ಲಿ ಕಾಣಸಿಗುತ್ತದೆ. ಸಿಂಮುಖದಿಂದ ಹೊರಟ ಬಳ್ಳಿಗಳ ವಿನ್ಯಾಸದೊಳಗೆ ಲಭ್ಯವಿರುವ ಅಲ್ಪಾವಕಾಶದಲ್ಲಿ ಅಷ್ಟಭುಜಗಳ ದೇವಿಯನ್ನೂ ಆಕೆಯ ಪರಿವಾರದ ವಾದ್ಯಗಾರರನ್ನೂ ಚಿತ್ರಿಸಿರುವ ಶಿಲ್ಪಿಯ ಕೌಶಲಕ್ಕೆ ಬೆರಗಾಗಲೇಬೇಕು. ದೇವಿಯ ಮಂದಸ್ಮಿತದ ವದನವೂ ಆಕರ್ಷಕವಾಗಿ ಕಾಣುತ್ತದೆ.
ಶಿವಪಾರ್ವತಿ, ಲಕ್ಷ್ಮೀನಾರಾಯಣರ ವಿಗ್ರಹಗಳನ್ನು ಕಾಣುವಾಗಲೆಲ್ಲ ಬಿಡುವಿಲ್ಲದ ಬ್ರಹ್ಮನನ್ನು ಕಟ್ಟಿಕೊಂಡ ಸರಸ್ವತಿಯ ಬಗೆಗೆ ಕನಿಕರ ಮೂಡುತ್ತಿತ್ತು. ಇಂತಹ ಅನುಕಂಪಕ್ಕೆ ಅವಕಾಶವಿಲ್ಲದಂತೆ ಹೊಯ್ಸಳ ಶಿಲ್ಪಿಗಳು ಬ್ರಹ್ಮನ ತೊಡೆಯ ಮೇಲೆ ಸರಸ್ವತಿಯನ್ನು ಕೂರಿಸಿ ನೆಮ್ಮದಿತಂದಿದ್ದಾರೆ. ಈ ಅಪೂರ್ವಶಿಲ್ಪವನ್ನು ನೀವು ಹಳೇಬೀಡಿನ ಹೊಯ್ಸಳೇಶ್ವರ ದೇಗುಲದಲ್ಲಿ ಮಾತ್ರವಲ್ಲ, ಕಿಕ್ಕೇರಿಯ ಬ್ರಹ್ಮೇಶ್ವರ ದೇಗುಲದ ಹೊರಗೋಡೆಯ ಮೇಲೂ ಕಾಣಬಹುದು.
| ಮೊಸಳೆ ದೇಗುಲದ ಶಿಲ್ಪ |

No comments:
Post a Comment