ದಕ್ಷಿಣ ಭಾರತದ ದೇವಾಲಯಗಳ ಶಿಲ್ಪವೈಭವ, ಕಟ್ಟಡಗಳ ನಿರ್ಮಿತಿ, ಸರ್ವಾಭರಣ ಭೂಷಿತ ದೇವತಾ ಪ್ರತಿಮೆಗಳು, ಲಾಂಛನಧಾರಿಗಳಾದ ಅರ್ಚಕರ ಸಡಗರ, ಪೂಜೆ-ಆರತಿ-ಕಟ್ಟಲೆಗಳ ಆಡಂಬರ, ರುಚಿಯಾದ ಪ್ರಸಾದವಿನಿಯೋಗ- ಇವನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ನೀವು ಉತ್ತರ ಭಾರತದ ದೇಗುಲಗಳತ್ತ ಹೊರಟರೆ ನಿರಾಶೆಯಾಗುವುದು ಖಂಡಿತ. ಸಾಧಾರಣವಾದ ಕಟ್ಟಡ, ಸರಳ ಅಲಂಕಾರದ ದೇವಬಿಂಬ, ಸಿವಿಲ್ ಡ್ರೆಸ್ಸಿನ ಪೂಜಾರಿಗಳು, ವಿಭಿನ್ನ ಶೈಲಿಯ, ಉಚ್ಚಾರಣೆಯ ಪೂಜಾಚರಣೆಗಳನ್ನು ಕಾಣುವಾಗ ದಾಕ್ಷಿಣಾತ್ಯ ಭಕ್ತರು ಸ್ವಲ್ಪ ತಬ್ಬಿಬ್ಬುಗೊಂಡರೆ ಅಚ್ಚರಿಯಿಲ್ಲ.
ಹಿಮಾಚಲ ಪ್ರದೇಶದ ಖ್ಯಾತ ಶಕ್ತಿಪೀಠಗಳಾದ ಬಜ್ರೇಶ್ವರಿ, ಚಾಮುಂಡಾ, ಜ್ವಾಲಾಜಿ ಹಾಗೂ ಚಿಂತಪೂರ್ಣಿ ದೇಗುಲಗಳನ್ನು ದರ್ಶಿಸುವಾಗ ನನಗೆ ಅನ್ನಿಸಿದ್ದೂ ಹೀಗೆಯೇ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ವೃತ್ತಿನಿಮಿತ್ತ ತಂಗಿರುವ ಬೆಂಗಳೂರಿನ ಮೇಧಾವಿ ಇಂಜಿನಿಯರ್ ಹಾಗೂ ಬಂಧು ರವಿಕುಮಾರ್ ಅವರೊಡನೆ ಇತ್ತೀಚೆಗೆ ಕಾಂಗ್ರಾ ಜಿಲ್ಲೆಯ ಆಸುಪಾಸಿನಲ್ಲಿ ಸಂಚರಿಸುವ ಅವಕಾಶ ಸಿಕ್ಕಿತ್ತು. ಸಿಮ್ಲಾ, ಕುಲು, ಮನಾಲಿಗಳನ್ನು ನೋಡುವುದಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ತಿರುಗಾಡುವುದೇ ನನ್ನ ಇಷ್ಟವೆಂದು ಅವರಿಗೆ ಮೊದಲೇ ಹೇಳಿದ್ದೆ. ಹಾಗೆ ತಿರುಗಾಡುವಾಗ ಹಲವು ಪ್ರಸಿದ್ಧ ದೇಗುಲಗಳನ್ನು ನೋಡುವ ಅವಕಾಶವಾಯಿತು. ಹಿಮಾಚಲದವರು ತಮ್ಮ ನಾಡನ್ನು ದೇವಭೂಮಿ ಎಂದು ಕರೆದುಕೊಳ್ಳುತ್ತಾರೆ. ಕೈಲಾಸವಂತೂ ಹತ್ತಿರದಲ್ಲೇ ಇದೆ. ನಾಡಿನ ಎಲ್ಲೆಡೆ ನೆಲೆಗೊಂಡಿರುವ ಶಿವಪಾರ್ವತಿಯರ ದೇಗುಲಗಳಿಗೆ ಪೌರಾಣಿಕ ಕಥೆಗಳೂ ಪ್ರಚಲಿತವಾಗಿವೆ. ಪುಣ್ಯಕ್ಷೇತ್ರಕ್ಕಿರುವ ಮಹಿಮೆಯ ಕಥಾವೈಭವವಂತೂ ದಿನದಿನವೂ ಅಪಾರಸಂಖ್ಯೆಯ ಭಕ್ತರನ್ನು ಸೆಳೆಯುವಷ್ಟು ಪರಿಣಾಮಕಾರಿಯಾಗಿದೆ. ಆದರೆ ಅದೇ ವೈಭವ ಗುಡಿಯ ಕಟ್ಟಡ, ದೇವತೆಗಳ ಬಿಂಬಗಳಲ್ಲಿ ಕಾಣುವುದಿಲ್ಲ ಎಂದಷ್ಟೇ ನನಗೆ ತೋರಿದ್ದು.
ಆದರೆ, ಕಾಂಗ್ರಾದಿಂದ ಮಂಡಿ ಜಿಲ್ಲಾಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಕಾಣಸಿಗುವ ಬೈಜನಾಥ ಮಂದಿರ ನನ್ನ ಅಭಿಪ್ರಾಯಕ್ಕಿಂತ ಬೇರೆಯಾಗಿ ಗೋಚರಿಸಿತು. ಐಹೊಳೆ, ಪಟ್ಟದಕಲ್ಲುಗಳ ಗುಡಿಯ ರಚನೆಯನ್ನು ನೆನಪಿಸುವ ಪ್ರಾಚೀನ ಭವ್ಯ ಕಟ್ಟಡ.
ನಾಸಿಕದ ತ್ರಯಂಬಕೇಶ್ವರ ದೇವಾಲಯವನ್ನೂ ನೆನಪಿಸುವಂತಿರುವ ದೇಗುಲ. ಪ್ರಾಚೀನ ಪಾರಂಪರೆಯ ಸಂರಕ್ಷಿತ ಕಟ್ಟಡವೆಂಬ ಭಾರತ ಸರ್ಕಾರದ ಫಲಕವಿದ್ದರೂ ಹೆಚ್ಚಿನ ವಿವರಣೆ ಎಲ್ಲೂ ಕಾಣಸಿಗಲಿಲ್ಲ. ರಾವಣನು ಶಿವನನ್ನು ಕುರಿತು ತಪಸ್ಸು ಮಾಡಿ ತಂದ ಆತ್ಮಲಿಂಗವಿರುವ ಗೋಕರ್ಣಕ್ಷೇತ್ರವೇ ಇದೆಂದು ಹಲವರ ಹೇಳಿಕೆ. ಕರ್ನಾಟಕದ ಗೋಕರ್ಣ ಅವರಾರಿಗೂ ಪರಿಚಯವಿದ್ದಂತಿಲ್ಲ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ವರ್ಣಿತವಾಗಿರುವ ಬೈಜನಾಥೇಶ್ವರ ಈ ದೇಗುಲದಲ್ಲೇ ನೆಲೆಸಿರುವನೆಂಬ ಹೇಳಿಕೆಗೆ ಹೆಚ್ಚಿನ ಪುಷ್ಟಿಯಿಲ್ಲ. ಬೈಜನಾಥೇಶ್ವರ ಮಹಾರಾಷ್ಟ್ರದಲ್ಲೇ ನೆಲೆಸಿರುವನೆಂಬ ಒಂದು ವಾದವಿದ್ದರೆ, ಬೈಜನಾಥನ ನೆಲೆಯನ್ನು ಈಗ ಪಾಕಿಸ್ತಾನಕ್ಕೆ ಸೇರಿಹೋಗಿರುವ ಪ್ರದೇಶದಲ್ಲಿ ಗುರುತಿಸುವವರೂ ಇದ್ದಾರೆ.
ಅದೇನೇ ಇರಲಿ, ಕಾಂಗ್ರಾ ಜಿಲ್ಲೆಯ ಈ ದೇವಾಲಯ ತನ್ನ ಆವರಣ, ಕಟ್ಟಡ, ಶಿಲ್ಪಕಲೆ, ಪರಿಸರಗಳಿಂದ ಗಮನಸೆಳೆಯುತ್ತದೆ. ಇತರ ದೇಗುಲಗಳಿಗಿರುವಂತೆಯೇ ಇಲ್ಲಿಯ ಸ್ಥಳಪುರಾಣವೂ ಜನಪ್ರಿಯವಾಗಿದೆ. ಇಂದ್ರನ ಅಹಂಕಾರದಿಂದ ಕ್ರೋಧಗೊಂಡ ಶಿವನ ಅಂಶದಿಂದ ಜಲಂಧರನೆಂಬ ರಕ್ಕಸ ಅವತರಿಸುತ್ತಾನೆ. ಪರಮ ಶಿವಭಕ್ತನೂ ಬೃಂದೆಯೆಂಬ ಪತಿವ್ರತೆಯ ಪತಿಯೂ ಆದ ಜಲಂಧರನ ಆಟೋಪವನ್ನು ಸಹಿಸಲಾರದ ದೇವತೆಗಳು ಅವನನ್ನು ಸಂಹರಿಸುವಂತೆ ತ್ರಿಮೂರ್ತಿಗಳನ್ನು ಕೋರುತ್ತಾರೆ. ಜಲಂಧರನು ಪಾರ್ವತೀದೇವಿಯನ್ನೇ ಕೆಣಕಲು ಹೊರಟಾಗ ಕ್ರೋಧಗೊಂಡ ಬ್ರಹ್ಮವಿಷ್ಣು ಮಹೇಶ್ವರರು ಜಲಂಧರನನ್ನು ಸಂಹರಿಸುತ್ತಾರೆ. ಜಲಂಧರನ ಪತ್ನಿ ಬೃಂದೆಯ ಪಾತಿವ್ರತ್ಯದ ಮಹಿಮೆಯಿಂದ ತ್ರಿಮೂರ್ತಿಗಳಿಗೂ ಜಲಂಧರನ ಹತ್ಯೆಯ ಪಾಪವು ಆವರಿಸುತ್ತದೆ. ಅದರಿಂದ ಪಾರಾಗಲು ಶಿವನು ಇದೇ ಕ್ಷೇತ್ರದಲ್ಲಿ ದುರ್ಗೆಯ ರೂಪವಾದ ಶ್ರೀ ತಾರಾದೇವಿಯ ಉಪಾಸನೆಯನ್ನು ಕೈಗೊಂಡು ಪ್ರಾಯಶ್ಚಿತ್ತವನ್ನು ಆಚರಿಸಿದನೆಂದು ಒಂದು ಕಥೆಯಿದೆ. ಬೈಜು ಎಂಬ ಭಕ್ತನನ್ನು ಅನುಗ್ರಹಿಸಿದ ಸ್ಥಳವಾದುದರಿಂದ ಬೈಜನಾಥ್ ಎಂಬ ಹೆಸರು ಬಂದಿತೆಂಬ ಐತಿಹ್ಯವೂ ಉಂಟು.
ತ್ರಿಗರ್ತವೆಂದು ಪುರಾಣಗಳಲ್ಲಿ ವರ್ಣಿತವಾದ ಈ ಪ್ರದೇಶ ಆಗಿಂದಾಗ್ಗೆ ಧಾಳಿಕೋರರ ಆಕ್ರಮಣಕ್ಕೆ ಗುರಿಯಾಗುತ್ತಿತ್ತು. ಇಲ್ಲಿ ಪೂರ್ವಕಾಲದಲ್ಲಿ ಕಟ್ಟಿದ್ದ ದೇಗುಲವು ನಾಶವಾಗಿ ಶಿವಲಿಂಗ ಮಾತ್ರವೇ ಉಳಿದುಕೊಂಡಿತ್ತೆಂದೂ ಅದಕ್ಕಾಗಿ ಕಟ್ಟಡವನ್ನು ಪುನರ್ನಿರ್ಮಾಣ ಮಾಡಲಾಯಿತೆಂದೂ ಕ್ರಿ.ಶ. ೮೦೪ ನೇ ವರ್ಷದ್ದೆಂದು ಹೇಳಲಾಗುವ ಒಂದು ಶಾಸನದಲ್ಲಿ ವರ್ಣಿಸಲಾಗಿದೆ. ಅಂದರೆ, ಈ ದೇವಸ್ಥಾನ ಕನಿಷ್ಠ ೧೨೦೦ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದೆಂದಾಯಿತು. ಪುನಃ ಕ್ರಿ.ಶ. ೧೦೦೯ ರಲ್ಲಿ ಘಜ್ನಿ ಮಹಮ್ಮದನ ಸೈನ್ಯದಿಂದ ಧಾಳಿಗೆ ತುತ್ತಾದ ಈ ದೇವಾಲಯದ ಜೀರ್ಣೋದ್ಧಾರವನ್ನು ಮುಂದೆ ಈ ಪ್ರದೇಶವನ್ನು ಆಳಿದ ಸ್ಥಳೀಯ ರಾಜರು ಆಗಿಂದಾಗ್ಗೆ ಕೈಗೊಂಡರೆಂದು ತಿಳಿದುಬರುತ್ತದೆ. ೧೭೮೪ ರಲ್ಲಿ ಮಹಾರಾಜ ಸಂಸಾರಚಂದ್ರಜಿ ಎಂಬ ದೊರೆ ಈ ದೇಗುಲವನ್ನು ದುರಸ್ತಿ ಮಾಡಿಸಿದುದರ ಉಲ್ಲೇಖವಿದೆ. ಭೂಕಂಪದ ದೆಸೆಯಿಂದ ಕಳೆದ ಶತಮಾನದ ಆದಿಯಲ್ಲಿ ಬೈಜನಾಥ ದೇಗುಲಕ್ಕೂ ಹಾನಿಯಾಗಿದ್ದು ಆಗಿನ ಬ್ರಿಟಿಷ್ ಆಧಿಪತ್ಯದ ಅಧೀನದ ಸರ್ಕಾರವು ಮರಾಮತಿ ಕಾರ್ಯವನ್ನು ನಿರ್ವಹಿಸಿದ ವರದಿಯೂ ಉಂಟೂ. ಇಲ್ಲಿನ ವಾಸ್ತುಶಿಲ್ಪಕಲೆ ಕ್ರಿ.ಶ. ಎಂಟನೇ ಶತಮಾನದ ದೊರೆಗಳ ಕಲಾಪ್ರೇಮದ ಪ್ರತೀಕವಾಗಿ ಹಾಗೆಯೇ ಉಳಿದುಕೊಂಡು ಬಂದಿರುವುದನ್ನು ಕಾಣಬಹುದು.
ದೇವಾಲಯದ ಆವರಣದಲ್ಲಿರುವ ನಂದಿ, ಗಣಪತಿ, ಹನುಮಾನ್, ಭೃಂಗಿ, ಮಹಾಕಾಳಿ- ಮೊದಲಾದ ಮೂರ್ತಿಗಳು ಸುಸ್ಥಿತಿಯಲ್ಲಿದ್ದು ಅವುಗಳ ಕೆತ್ತನೆ ಆಕರ್ಷಕವಾಗಿ ಕಾಣುತ್ತದೆ. ಕಿಟಕಿ, ದ್ವಾರಗಳ ಮೇಲಿನ ಕೆತ್ತನೆಯೂ ಗಮನ ಸೆಳೆಯುವಂತಿವೆ. ಗೋಪುರ, ದೇವಾಲಯದ ಹೊರಗೋಡೆಗಳ ವಿನ್ಯಾಸ ಶಿಲ್ಪಕಲಾ ಅಧ್ಯಯನ ಮಾಡುವವರಿಗೆ ಪ್ರಾಚೀನ ಶಿಲ್ಪಕಲೆಯ ಮಾದರಿಗಳಾಗಿ ಉತ್ತಮಸ್ಥಿತಿಯಲ್ಲಿ ಉಳಿದುಕೊಂಡು ಬಂದಿರುವುದು ಸಮಾಧಾನಕರ ಅಂಶ. ಪ್ರಧಾನ ದೇಗುಲದಲ್ಲೂ ಆವರಣದಲ್ಲೂ ಕಂಡುಬರುವ, ಹೆಡೆ ಬಿಚ್ಚಿದ ನಾಗನಿಂದ ಅಲಂಕೃತವಾದ ಶಿವಲಿಂಗಗಳು ಇಲ್ಲಿಗೆ ಬಹುಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಮನದುಂಬುತ್ತವೆ.
ಸಮುದ್ರಮಟ್ಟದಿಂದ ೧೦೦೦ ಮೀಟರ್ ಎತರವಿರುವ ಈ ಪ್ರದೇಶದಿಂದ ಕಾಣಸಿಗುವ ಹಿಮಾಲಯದ ಧವಳಧಾರ್ ಪರ್ವತಶ್ರೇಣಿಯ ದೃಶ್ಯ ಮನಮೋಹಕ. ಬಿನವಾ ನದಿಯ ದಂಡೆಯಲ್ಲಿರುವ ಈ ದೇಗುಲವನ್ನು ಅದರ ಪುರಾಣಪ್ರಸಿದ್ಧಿಗಾಗಿ ಮಾತ್ರವಲ್ಲದೆ ಪ್ರಾಚೀನತೆ, ವಾಸ್ತುಶಿಲ್ಪದ ಮಹತ್ವಗಳಿಗಾಗಿಯೂ ನೀವು ಒಮ್ಮೆ ನೋಡಬೇಕು.
ಹಿಮಾಚಲ ಪ್ರದೇಶದ ಪ್ರಮುಖ ಜಿಲ್ಲಾ ಕೇಂದ್ರಗಳಾದ ಕಾಂಗ್ರಾ (ಸ್ಥಳೀಯ ಭಾಷೆಯಲ್ಲಿ ಕಾಂಗ್ಡ) ಮತ್ತು ಮಂಡಿ ಪಟ್ಟಣಗಳ ನಡುವಿನ ಹೆದ್ದಾರಿಯಲ್ಲಿ ಪಾಲಂಪುರದಿಂದ ಜೋಗಿಂದರ್ ನಗರದೆಡೆಗೆ ೪೦ ಕಿ.ಮೀ. ಸಂಚರಿಸಿದರೆ ಮುಖ್ಯರಸ್ತೆಯಲ್ಲೇ ಬೈಜನಾಥ್ ಕಾಣಸಿಗುತ್ತದೆ. ಪಠಾಣ್‌ಕೋಟ್‌ನಿಂದ ಗಿರಿತಾಣಗಳಲ್ಲೊಂದಾದ ಜೋಗಿಂದರ್ ನಗರದವರೆಗೆ ಬರುವ ನ್ಯಾರೋಗೇಜ್ ರೈಲಿನಲ್ಲೂ ಇಲ್ಲಿಗೆ ಬರಬಹುದು.
ಫೆಬ್ರುವರಿ ೨೦, ೨೦೧೪ರ ಸುಧಾದಲ್ಲಿ ಪ್ರಕಟವಾದ ಲೇಖನ

No comments:
Post a Comment