ಹೊಯ್ಸಳ ಶಿಲ್ಪಗಳಲ್ಲಿ ಸರಸ್ವತಿ

Friday, October 9, 2015

ಟಿ.ಎಸ್. ಗೋಪಾಲ್

ಮೊಸಳೆ ದೇಗುಲದ ಶಿಲ್ಪ
ಶಕ್ತಿದೇವತೆಯ  ವಿವಿಧ ರೂಪಗಳಲ್ಲಿ ಸರಸ್ವತಿಯ ಹೆಸರೂ ಸೇರುತ್ತದೆ. ಆದಿಶಕ್ತಿಯ ವಿವಿಧ ರೂಪಗಳನ್ನು ಅರ್ಚಿಸುವ ನವರಾತ್ರಿಯ ಪೂಜಾವಿಧಿಗಳಲ್ಲಿ ಸರಸ್ವತೀಪೂಜೆಯೂ ಸಾಂಗವಾಗಿ ನೆರವೇರುತ್ತದೆ. ವಿದ್ಯಾದೇವಿಯ ಅವತಾರವಾದ ಸರಸ್ವತಿಯನ್ನು ವೇದಗಳಲ್ಲಿ ನದಿಯೆಂದೂ ದೇವತೆಯೆಂದೂ ಗುರುತಿಸಲಾಗಿದೆ. ಒಂದು ಕಾಲಕ್ಕೆ ನದಿಯಾಗಿ ಹರಿದು ಹರಿವನ್ನು ಬದಲಿಸುತ್ತಲೇ ಅಂತರ್ಧಾನಳಾದ ಸರಸ್ವತಿ ವಿದ್ಯಾದೇವತೆಯಾದ ಕಥೆಯನ್ನು ಕೇಳಿದ್ದೇವೆ.

ಹನ್ನೆರಡನೆಯ ಶತಮಾನದ ಒಂದು ಕನ್ನಡ ಶಾಸನ ಪದ್ಯ ಹೀಗೆ ಹೇಳುತ್ತದೆ: ಸಮಸ್ತ ಬ್ರಹ್ಮಾಂಡಗಳನ್ನು ಮಣಿಮಾಲೆಯಾಗಿ ಕೈಯಲ್ಲಿ ಧರಿಸಿ, ತನಗೆ ಶರಣುಬಂದವರಿಗೆ ಲೇಸನ್ನು ಬಯಸುತ್ತ ಯಾವ ದೇವಿಯು ಹಗಲಿರುಳೂ ಜಪಿಸುತ್ತಿರುವಳೋ ಆ ಸರಸ್ವತಿಯು ನಮ್ಮ ನಾಲಗೆಯಲ್ಲಿ ಸದಾ ನೆಲೆಸಿರಲಿ. ಸರಸ್ವತಿಯು ಸಕಲಜಗತ್ತಿಗೆ ಒಳಿತನ್ನು ಬಯಸುತ್ತಾ  ಸದಾ ತಪೋನಿರತಳಾಗಿರುವ ಯೋಗಿನಿ ಎಂಬ ಈ ವರ್ಣನೆ ಶ್ರೇಷ್ಠ ಆದರ್ಶದ ಮಾದರಿಯನ್ನು ಮುಂದಿಡುತ್ತದೆ. ಹೊಯ್ಸಳಶಿಲ್ಪಗಳಲ್ಲಿ ಮೂಡಿಬಂದಿರುವ ಈ ಸಾತ್ವಿಕದೇವತೆಯ ರೂಪವೂ ಮೇಲಿನ ಶಾಸನಪದ್ಯಕ್ಕೆ ಅನುಗುಣವಾಗಿರುವುದನ್ನು ಕಾಣಬಹುದು.

ಸುಂದರ ವಾಸ್ತುಶಿಲ್ಪದ ಪ್ರಾಚೀನ ದೇವಾಲಯ: ಬೈಜನಾಥ

Saturday, March 15, 2014

ದಕ್ಷಿಣ ಭಾರತದ ದೇವಾಲಯಗಳ ಶಿಲ್ಪವೈಭವ, ಕಟ್ಟಡಗಳ ನಿರ್ಮಿತಿ, ಸರ್ವಾಭರಣ ಭೂಷಿತ ದೇವತಾ ಪ್ರತಿಮೆಗಳು, ಲಾಂಛನಧಾರಿಗಳಾದ ಅರ್ಚಕರ ಸಡಗರ, ಪೂಜೆ-ಆರತಿ-ಕಟ್ಟಲೆಗಳ ಆಡಂಬರ, ರುಚಿಯಾದ ಪ್ರಸಾದವಿನಿಯೋಗ- ಇವನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ನೀವು ಉತ್ತರ ಭಾರತದ ದೇಗುಲಗಳತ್ತ ಹೊರಟರೆ ನಿರಾಶೆಯಾಗುವುದು ಖಂಡಿತ. ಸಾಧಾರಣವಾದ ಕಟ್ಟಡ, ಸರಳ ಅಲಂಕಾರದ ದೇವಬಿಂಬ, ಸಿವಿಲ್ ಡ್ರೆಸ್ಸಿನ ಪೂಜಾರಿಗಳು, ವಿಭಿನ್ನ ಶೈಲಿಯ, ಉಚ್ಚಾರಣೆಯ ಪೂಜಾಚರಣೆಗಳನ್ನು ಕಾಣುವಾಗ  ದಾಕ್ಷಿಣಾತ್ಯ ಭಕ್ತರು ಸ್ವಲ್ಪ ತಬ್ಬಿಬ್ಬುಗೊಂಡರೆ ಅಚ್ಚರಿಯಿಲ್ಲ.

ಹಿಮಾಚಲ ಪ್ರದೇಶದ ಖ್ಯಾತ ಶಕ್ತಿಪೀಠಗಳಾದ  ಬಜ್ರೇಶ್ವರಿ, ಚಾಮುಂಡಾ, ಜ್ವಾಲಾಜಿ ಹಾಗೂ ಚಿಂತಪೂರ್ಣಿ ದೇಗುಲಗಳನ್ನು ದರ್ಶಿಸುವಾಗ ನನಗೆ ಅನ್ನಿಸಿದ್ದೂ ಹೀಗೆಯೇ.